‘ದಿ ಲಂಚ್ಬಾಕ್ಸ್’ ಕೇವಲ ಒಂದು ಚಲನಚಿತ್ರವಲ್ಲ; ಅದು ಬದುಕಿನ ನೈಜತೆ, ಜವಾಬ್ದಾರಿಗಳು ಮತ್ತು ಒಂಟಿತನದ ನಡುವೆ ನಡೆಯುವ ಗಂಭೀರ ಮುಖಾಮುಖಿ.

ಮುಂಬೈನಂತಹ ಮಹಾನಗರದಲ್ಲಿ ದಿನನಿತ್ಯದ ಜಂಜಾಟ, ಕರ್ತವ್ಯದ ಒತ್ತಡಗಳ ನಡುವೆ ತನ್ನತನವನ್ನು ಕಳೆದುಕೊಂಡಿರುವ ಇಬ್ಬರು ವ್ಯಕ್ತಿಗಳ ಬದುಕನ್ನು ಈ ಚಿತ್ರ ಅತ್ಯಂತ ಗಂಭೀರವಾಗಿ ಕಟ್ಟಿಕೊಡುತ್ತದೆ. ನಿವೃತ್ತಿಯ ಹೊಸ್ತಿಲಲ್ಲಿರುವ ಸಾಜನ್ ಫರ್ನಾಂಡಿಸ್ ಹಾಗೂ ದಾಂಪತ್ಯದ ನಿರಾಸೆಯಲ್ಲಿರುವ ಇಲಾ ನಡುವೆ ತಪ್ಪಾಗಿ ತಲುಪುವ ಒಂದು ಊಟದ ಡಬ್ಬಿ ಇಡೀ ಕಥೆಯ ತಿರುಳು.
ಅತಿಯಾದ ನಾಟಕೀಯತೆ ಇಲ್ಲದೆ, ಪ್ರತಿಯೊಬ್ಬ ಮನುಷ್ಯನ ಅಂತರಾಳದ ಏಕಾಂತತೆಯನ್ನು ಚಿತ್ರವು ನೇರವಾಗಿ ಅನಾವರಣಗೊಳಿಸುತ್ತದೆ.
ಇಲ್ಲಿನ ಪ್ರೇಮ ಮತ್ತು ಭಾವನೆಗಳು ಪ್ರಬುದ್ಧತೆಯಿಂದ ಕೂಡಿವೆ. ಮುಖಾಮುಖಿ ಭೇಟಿಯಾಗದ ಇಬ್ಬರು ವ್ಯಕ್ತಿಗಳು ಪತ್ರಗಳ ಮೂಲಕ ತಮ್ಮ ವಾಸ್ತವ, ನೋವು ಮತ್ತು ಕಳೆದುಹೋದ ಕನಸುಗಳನ್ನು ಹಂಚಿಕೊಳ್ಳುತ್ತಾರೆ. ಪ್ರೀತಿ ಎಂದರೆ ಕೇವಲ ಬಾಹ್ಯ ಆಕರ್ಷಣೆಯಲ್ಲ; ಅದು ಒಬ್ಬರ ಬದುಕಿಗೆ ಇನ್ನೊಬ್ಬರು ಕೊಡುವ ಗೌರವ, ನೆಮ್ಮದಿ ಮತ್ತು ಸಾಂತ್ವನ ಎಂಬುದನ್ನು ಇರ್ಫಾನ್ ಖಾನ್ ಮತ್ತು ನಿಮ್ರತ್ ಕೌರ್ ತಮ್ಮ ಸಂಯಮದ ಅಭಿನಯದ ಮೂಲಕ ನಿರೂಪಿಸಿದ್ದಾರೆ. ಸಂಭಾಷಣೆಗಳಿಗಿಂತ ಹೆಚ್ಚಾಗಿ ಅವರ ಮೌನವೇ ಬದುಕಿನ ಆಳವಾದ ಸತ್ಯಗಳನ್ನು ಸಾರುತ್ತದೆ.
ಈ ಚಿತ್ರವನ್ನು ಅದೆಷ್ಟುಸಲ ವೀಕ್ಷಿಸಿದರೂ ಮನಸ್ಸಿನಲ್ಲಿ ಹೊಸ ಚೈತನ್ಯ ಮತ್ತು ದೃಢವಾದ ಭರವಸೆ ಮೂಡುತ್ತದೆ. “ಕೆಲವೊಮ್ಮೆ ತಪ್ಪು ರೈಲು ಕೂಡ ನಮ್ಮನ್ನು ಸರಿಯಾದ ನಿಲ್ದಾಣಕ್ಕೆ ಕರೆದೊಯ್ಯುತ್ತದೆ” ಎಂಬ ಮಾತು, ಎಷ್ಟೇ ಕಠಿಣ ಸಂದರ್ಭಗಳಿದ್ದರೂ ಮುನ್ನಡೆಯುವ ಧೈರ್ಯವನ್ನು ತುಂಬುತ್ತದೆ.
ಸರಳತೆ, ಸ್ವಾಭಿಮಾನ ಮತ್ತು ಮಾನವೀಯ ಸಂಬಂಧಗಳ ಮಹತ್ವವನ್ನು ಎತ್ತಿಹಿಡಿಯುವ ಈ ಕೃತಿ, ವೀಕ್ಷಕರ ಮನಸ್ಸಿನಲ್ಲಿ ಶಾಂತ ಹಾಗೂ ಗಂಭೀರವಾದ ಆಶಾವಾದವನ್ನು ಉಳಿಸುತ್ತದೆ.

