Do Deewane Seher Mein

ತುಂಬಾ ದಿನಗಳ ನಂತರ ಒಂದು ಸುಂದರ ಹಾಗೂ ಕ್ಯೂಟ್ ಪ್ರೇಮಕಥೆಯನ್ನು ನೋಡಿ ಮನಸ್ಸಿಗೆ ಖುಷಿಯಾಯಿತು. ಇತ್ತೀಚಿನ ದಿನಗಳಲ್ಲಿ ಪ್ರೀತಿಯ ಹೆಸರಿನಲ್ಲಿ ತೆರೆಯ ಮೇಲೆ ಬರುವ ಕಥೆಗಳನ್ನು ವಾಸ್ತವಕ್ಕೆ ಹೋಲಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಅಲ್ಲಿ ಸಹಜತೆಗಿಂತ ಕಲ್ಪನಾ ಲೋಕದ ಮಸಾಲೆಗಳೇ ಹೆಚ್ಚಿರುತ್ತವೆ. ಅಂತಹ ಸಿನಿಮಾಗಳ ನಡುವೆ ‘ದೋ ದಿವಾನೆ ಶಹರ್ ಮೇ’ ವಿಭಿನ್ನವಾಗಿ ನಿಲ್ಲುವಂಥಾ ಸಿನೇಮಾ.

ಚಿತ್ರವು ಪ್ರೀತಿಯೆಂದರೆ ಕೇವಲ ಆಕರ್ಷಣೆ ಮಾತ್ರವಲ್ಲ, ಬದಲಾಗಿ ಇಬ್ಬರು ವ್ಯಕ್ತಿಗಳು ಪರಸ್ಪರ ಹೇಗೆ ಗೌರವಿಸುತ್ತಾರೆ ಮತ್ತು ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಹೇಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂಬುದನ್ನು ಬಹಳ ಮನೋಜ್ಞವಾಗಿ ಚಿತ್ರಿಸುತ್ತದೆ.

ಸಿನಿಮಾದಲ್ಲಿ ಪ್ರೀತಿಯು ಒಬ್ಬರ ಕೊರತೆಯನ್ನು ಎತ್ತಿ ತೋರಿಸುವ ಬದಲು, ಆ ಕೊರತೆಯನ್ನೇ ಶಕ್ತಿಯನ್ನಾಗಿ ಬದಲಿಸುವ ಪರಿಯನ್ನು ಸುಂದರವಾಗಿ ಕಟ್ಟಿಕೊಡಲಾಗಿದೆ. ಶಶಾಂಕ್ ಮತ್ತು ರೋಶಿನಿ ತಮ್ಮ ಜೀವನದ ಸವಾಲುಗಳನ್ನು ಹಾಗೂ ತಮ್ಮೊಳಗಿನ ಕೀಳರಿಮೆಯನ್ನು ಪರಸ್ಪರ ಹಂಚಿಕೊಂಡಾಗ, ಅಲ್ಲಿ ಕೇವಲ ಕನಿಕರವಲ್ಲದೆ ಗಾಢವಾದ ಗೌರವ ಮೂಡುತ್ತದೆ.

ಪ್ರೀತಿಯಲ್ಲಿ ಬೆಂಬಲ ನೀಡುವುದೆಂದರೆ ಕೇವಲ ಜೊತೆಗಿರುವುದಲ್ಲ, ಸಂಗಾತಿಯು ತನ್ನನ್ನು ತಾನು ಪ್ರೀತಿಸುವಂತೆ ಪ್ರೇರೇಪಿಸುವುದು ಎಂಬ ಸತ್ಯವನ್ನು ಈ ಸಿನಿಮಾ ಸಾರುತ್ತದೆ. ಪರಸ್ಪರರ ನ್ಯೂನತೆಗಳನ್ನು ಒಪ್ಪಿಕೊಂಡು, ಒಬ್ಬರ ಆತ್ಮವಿಶ್ವಾಸವನ್ನು ಇನ್ನೊಬ್ಬರು ಹೆಚ್ಚಿಸಲು ಪಡುವ ಸಣ್ಣ ಸಣ್ಣ ಪ್ರಯತ್ನಗಳು ಪ್ರೇಕ್ಷಕರ ಮನ ಮುಟ್ಟುತ್ತವೆ. ಚಿತ್ರದ ಪ್ರತಿಯೊಂದು ದೃಶ್ಯವೂ ಪ್ರೀತಿಯಲ್ಲಿ ‘ಗೌರವ’ ಎಷ್ಟು ಮುಖ್ಯ ಮತ್ತು ಒಬ್ಬರ ಕನಸುಗಳಿಗೆ ಮತ್ತೊಬ್ಬರ ‘ಬೆಂಬಲ’ ಎಷ್ಟು ಅವಶ್ಯಕ ಎಂಬುದನ್ನು ಮೃದುವಾಗಿ ಹಾಗೂ ಅರ್ಥಪೂರ್ಣವಾಗಿ ವಿವರಿಸುತ್ತದೆ.

ಸಿದ್ಧಾಂತ್ ಹಾಗೂ ಮೃಣಾಲ್ ಅವರ ಕೆಮಿಸ್ಟ್ರಿ ಕೂಡ ತೆರೆಯ ಮೇಲೆ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ. ಒಟ್ಟಾರೆಯಾಗಿ, ಇದೊಂದು ನೋಡಬಹುದಾದ ಸಿನೇಮಾ.

Leave a Comment

Your email address will not be published. Required fields are marked *

Scroll to Top