The Hunt – The Rajiv Gandhi Assassination Case (2025)
ಈ ಮುಂಚೆ ಜಾನ್ ಅಬ್ರಾಹಂ ಅವರ ‘ಮದ್ರಾಸ್ ಕೆಫೆ’ ಸಿನಿಮಾ ನೋಡಿ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದೆ. ಅದು ಸಹ ರಾಜೀವ್ ಗಾಂಧಿ ಹತ್ಯೆಯ ಸುತ್ತ ಹೆಣೆದ ಕಥೆ. ಈಗ ಮತ್ತೆ ಅದೇ ಥೀಮ್ ಅನ್ನು ಇಟ್ಟುಕೊಂಡು, ಆ ತೊಂಬತ್ತು ದಿನಗಳಲ್ಲಿ ಹಂತಕರು ಯಾವ ರೀತಿ ಕೃತ್ಯ ಎಸಗಿದರು ಮತ್ತು ಅದರ ಹಿಂದಿರುವ ಕಥೆ ಏನು ಅನ್ನೋದನ್ನ ಈ ಸರಣಿಯ ಉದ್ದಕ್ಕೂ ಎಳೆ ಎಳೆಯಾಗಿ ತೋರಿಸಿದ್ದಾರೆ.
ಪ್ರಸ್ತುತ ಲಭ್ಯವಿರುವ ಸತ್ಯ ಸಂಗತಿಗಳ ಆಧಾರದ ಮೇಲೆ, ಈ ರೀತಿಯ ಕಥೆಯನ್ನು ಹೆಣೆಯುವುದು ಕಷ್ಟಕರವಾದ ಸಂಗತಿ. ಎಲ್ಲೂ ಯಾವ ಹೊಸತೊಂದು ವೈಚಾರಿಕ ವಿಷಯಕ್ಕೂ ಕಥೆ ವಾಲದಂತೆ, ವಾಸ್ತವ ಸತ್ಯ ಸಂಗತಿಗಳನ್ನು ಇಟ್ಟುಕೊಂಡು ನಿರ್ದೇಶಿಸಿದ ಸರಣಿಯಿದು. ಎಲ್ಲಾ ಪಾತ್ರಗಳು ತಮ್ಮ ತಮ್ಮ ಕ್ಯಾರೆಕ್ಟರ್‌ಗಳಿಗೆ ಜೀವ ತುಂಬಿವೆ. ತನಿಖಾಧಿಕಾರಿಗಳ ಬುದ್ಧಿವಂತಿಕೆ ಮತ್ತು ತೀರಾ ಕ್ಲಿಷ್ಟಕರವಾದ ಪ್ರಕರಣವನ್ನು ಭೇದಿಸುವಲ್ಲಿ ಅವರು ಅನುಭವಿಸುವ ಸವಾಲುಗಳನ್ನು ಸರಣಿ ಯಶಸ್ವಿಯಾಗಿ ತೋರಿಸುತ್ತದೆ.
LTTE ಅನ್ನು ಎತ್ತಿ ತೋರಿಸುವ “ಒಬ್ಬ ವ್ಯಕ್ತಿಗೆ ನಾಯಕನಾದವನು ಇನ್ನೊಬ್ಬನಿಗೆ ಭಯೋತ್ಪಾದಕ” ಎನ್ನುವ ಡೈಲಾಗ್‌ಗಳು ಸರಣಿಗೆ ಅರ್ಥ ನೀಡಿವೆ. ರಾಜಕೀಯ ಪ್ರಭಾವ ಮತ್ತು ಐತಿಹಾಸಿಕ ಸಂದರ್ಭಗಳ ಮೇಲೆ ಹೆಚ್ಚು ಗಮನ ಹರಿಸದೆ, ಸರಣಿಯು ಪ್ರಮುಖವಾಗಿ ತನಿಖೆಯ ಮೇಲೆ ಕೇಂದ್ರೀಕರಿಸುತ್ತದೆ.
ಒಟ್ಟಾರೆಯಾಗಿ, ಥ್ರಿಲ್ಲರ್ ಅಭಿಮಾನಿಗಳಿಗೆ ಇದು ಖಂಡಿತವಾಗಿಯೂ ನೋಡಲೇಬೇಕಾದ ಸರಣಿಯಾಗಿದ್ದು, ಅದರ ನಿರೂಪಣಾ ಶೈಲಿಯು ಪ್ರೇಕ್ಷಕರನ್ನು ಕೊನೆಯವರೆಗೂ ಕುತೂಹಲದಿಂದ ಕೊಂಡೊಯ್ಯುತ್ತದೆ.


