ಮೌನ ಪ್ರೇಮ ಮತ್ತು ನಿಸ್ವಾರ್ಥ ತ್ಯಾಗದ ಒಂದು ಸಾರ್ವಕಾಲಿಕ ಕಾವ್ಯ ರೈನ್ಕೋಟ್.
ರಿತುಪರ್ಣೋ ಘೋಷ್ ನಿರ್ದೇಶನದ ‘ರೈನ್ಕೋಟ್’ ತೆರೆಕಂಡು ಎರಡು ದಶಕಗಳೇ ಕಳೆದಿದ್ದರೂ, ಇಂದಿಗೂ ಇದು ಮನುಷ್ಯ ಸಂಬಂಧಗಳ ಆಳವನ್ನು ಶೋಧಿಸುವ ಒಂದು ಅದ್ಭುತ ಕಲಾಕೃತಿಯಾಗಿ ಉಳಿದಿದೆ. ಮತ್ತೆ ಮತ್ತೆ ನೋಡುವ ಅಭ್ಯಾಸವಿರುವ ಸಿನೆಮಾ ಪ್ರೇಮಿಗಳ ಪಾಲಿಗೆ, ಇದು ಇಂದಿಗೂ ತನ್ನ ತಾಜಾತನವನ್ನು ಕಳೆದುಕೊಳ್ಳದ ಒಂದು ಅಮೂಲ್ಯ ‘ಬುಕ್ಮಾರ್ಕ್’.
”ಒಬ್ಬ ಮಹಿಳೆ ತಾನು ಹೊಂದಿರಬಹುದಾದ ಪುರುಷನನ್ನು ಎಂದಿಗೂ ಮರೆಯುವುದಿಲ್ಲ; ಒಬ್ಬ ಪುರುಷ ತನಗೆ ದಕ್ಕದ ಮಹಿಳೆಯನ್ನು ಎಂದೂ ಮರೆಯುವುದಿಲ್ಲ” ಎಂಬ ಪ್ರಸಿದ್ಧ ಮಾತಿಗೆ ಈ ಚಿತ್ರ ಪಕ್ಕಾ ಉದಾಹರಣೆಯಾಗಿ ಕಾಣ್ಸತ್ತೆ. ಕಥೆಯ ನಾಯಕ ಮನ್ನು ತನ್ನ ಕಳೆದುಹೋದ ಬದುಕನ್ನು ಕಟ್ಟಿಕೊಳ್ಳಲು ಆರ್ಥಿಕ ಸಹಾಯಕ್ಕಾಗಿ ಸ್ನೇಹಿತರನ್ನು ಹುಡುಕುತ್ತಾ ಕೋಲ್ಕತ್ತಾಗೆ ಬಂದಾಗ, ಅವನ ಮನದ ಮೂಲೆಯಲ್ಲಿ ಹಳೆಯ ಪ್ರೇಯಸಿ ನೀರು ಅವಳನ್ನು ನೋಡುವ ತೀವ್ರ ಹಂಬಲವಿರುತ್ತದೆ. ಆರು ವರ್ಷಗಳ ಸುದೀರ್ಘ ವಿರಾಮದ ನಂತರ, ಮಳೆಯ ಮಧ್ಯಾಹ್ನವೊಂದರಲ್ಲಿ ಅವರಿಬ್ಬರು ಮುಖಾಮುಖಿಯಾದಾಗ ಚಿತ್ರವು ಅತ್ಯಂತ ಭಾವನಾತ್ಮಕ ರೂಪ ಪಡೆದಿತ್ತು.
ಈ ಸಿನಿಮಾದ ಶಕ್ತಿ ಇರುವುದು ಪಾತ್ರಗಳು ಧರಿಸುವ ‘ಸುಳ್ಳಿನ ಮುಖವಾಡ’ದಲ್ಲಿ. ಮನ್ನು ಮತ್ತು ನೀರು ಇಬ್ಬರೂ ತಮ್ಮ ಬದುಕಿನ ಕಹಿ ವಾಸ್ತವಗಳನ್ನು ಮರೆಮಾಚಿ, ತಾವು ಸುಖವಾಗಿದ್ದೇವೆ ಎಂದು ಪರಸ್ಪರ ತೋರಿಸಿಕೊಳ್ಳಲು ನಡೆಸುವ ಹರಸಾಹಸವು ಪ್ರೇಕ್ಷಕನ ಎದೆಯನ್ನು ಕಲಕುವಂತೆ ಮಾಡುತ್ತಧೆ. ಐಶ್ವರ್ಯಾ ತನ್ನ ವೈವಾಹಿಕ ಜೀವನದ ಆಡಂಬರದ ಬಗ್ಗೆ ಕಾಲ್ಪನಿಕ ಕಥೆಗಳನ್ನು ಹೇಳಿದರೆ, ಅಜಯ್ ತಾನೊಬ್ಬ ಯಶಸ್ವಿ ಉದ್ಯಮಿ ಎಂದು ಬಿಂಬಿಸಿಕೊಳ್ಳುತ್ತಾನೆ. ಈ ವಂಚನೆಯ ಹಿಂದೆ ಯಾರನ್ನೋ ಮೋಸಗೊಳಿಸುವ ಉದ್ದೇಶವಿರಲಿಲ್ಲ; ಬದಲಾಗಿ ಪರಸ್ಪರರ ಮುಂದೆ ತಮ್ಮ ಘನತೆಯನ್ನು ಉಳಿಸಿಕೊಳ್ಳುವ ಮತ್ತು ಪ್ರೀತಿಸಿದ ವ್ಯಕ್ತಿಗೆ ತಮ್ಮ ಅಸಹಾಯಕತೆ ತಿಳಿಯಬಾರದು ಎಂಬ ‘ಕರುಣಾಜನಕ ಪ್ರಯತ್ನ’ ಅದಾಗಿತ್ತು.
ಶುಭಾ ಮುದ್ಗಲ್ ಅವರ ಶಾಸ್ತ್ರೀಯ ಸಂಗೀತ ಮತ್ತು ಗುಲ್ಜಾರ್ ಅವರ ಸಾಹಿತ್ಯವು ಚಿತ್ರದ ಸಂಭಾಷಣೆಗಳಿಗೆ ಒಂದು ದೈವಿಕ ಸ್ಪರ್ಶ ನೀಡಿವೆ. ನೀರು ವಾಸಿಸುವ ಮನೆಯ ಮಂದ ಬೆಳಕಿನ ಕೋಣೆಯೊಳಗೆ ಅಡಗಿದ್ದ ದಾರಿದ್ರ್ಯವು, ಹೊರಗಿನ ಮಳೆಗಿಂತಲೂ ಹೆಚ್ಚು ತೇವವಾಗಿತ್ತು. ಇಲ್ಲಿ ಪ್ರೇಮವು ಮಾತುಗಳಿಗಿಂತ ಹೆಚ್ಚಾಗಿ, ಪರಸ್ಪರರ ಕಷ್ಟವನ್ನು ಅರಿತಾಗ ಅವರು ಮಾಡುವ ನಿಸ್ವಾರ್ಥ ‘ತ್ಯಾಗ’ದಲ್ಲಿ ಪ್ರತಿಫಲಿಸಿತ್ತು.
ಮನ್ನು ತನ್ನ ಕಷ್ಟದ ನಡುವೆಯೂ ರಹಸ್ಯವಾಗಿ ಹಣ ನೀಡಿ ಸಹಾಯ ಮಾಡಲು ಮುಂದಾದರೆ, ನೀರು ತನ್ನಲ್ಲಿದ್ದ ಕೊನೆಯ ಆಭರಣವನ್ನು ಅವನ ರೈನ್ಕೋಟ್ ಜೇಬಿನಲ್ಲಿ ಅಡಗಿಸುತ್ತಾಳೆ. ಓ. ಹೆನ್ರಿಯವರ ‘ಗಿಫ್ಟ್ ಆಫ್ ದಿ ಮ್ಯಾಗಿ’ ಕಥೆಯಿಂದ ಪ್ರೇರಿತವಾದ ಆ ಕ್ಲೈಮ್ಯಾಕ್ಸ್, ಇಂದಿಗೂ ಭಾರತೀಯ ಚಿತ್ರರಂಗದ ಅತ್ಯಂತ ಸುಂದರ ದೃಶ್ಯಗಳಲ್ಲಿ ಒಂದಾಗಿ ಉಳಿದಿದೆ
ನಟನೆಯಲ್ಲಿ ಅಜಯ್ ದೇವಗನ್ ಮತ್ತು ಅನ್ನು ಕಪೂರ್ ಅವರ ಅನುಭವ ಎದ್ದು ಕಂಡಿತ್ತು. ಆದರೆ ಅಚ್ಚರಿಯೆಂದರೆ ಐಶ್ವರ್ಯ ರೈ ಅವರು ತಮ್ಮ ಎಂದಿನ ಗ್ಲಾಮರ್ ಪಕ್ಕಕ್ಕಿಟ್ಟು, ಅಸ್ತವ್ಯಸ್ತಗೊಂಡ ನೋಟ ಮತ್ತು ಕಣ್ಣುಗಳಲ್ಲಿನ ವಿಷಾದದ ಮೂಲಕ ನೀಡಿದ ಅಭಿನಯ ಇಂದಿಗೂ ಅವರ ವೃತ್ತಿಜೀವನದ ಶ್ರೇಷ್ಠ ಕೆಲಸವಾಗಿ ಗುರುತಿಸಲ್ಪಡುತ್ತದೆ.
ಕೇವಲ ಮನರಂಜನೆಯನ್ನು ಬಯಸುವವರಿಗೆ ಈ ಚಿತ್ರ ಅಂದು ನಿಧಾನಗತಿಯದ್ದಾಗಿ ಕಂಡಿರಬಹುದು. ಆದರೆ ಬದುಕಿನ ಸೂಕ್ಷ್ಮ ಸಂವೇದನೆಗಳನ್ನು ಪ್ರೀತಿಸುವವರಿಗೆ ‘ರೈನ್ಕೋಟ್’ ಇಂದಿಗೂ ಒಂದು ಅಚ್ಚರಿಯ ರಸದೌತಣ. ಕಾಲ ಉರುಳಿದಂತೆ ಈ ಚಿತ್ರ ಹಳೆಯ ವೈನ್ನಂತೆ ಮತ್ತಷ್ಟು ಆಪ್ತವಾಗುತ್ತಾ ಹೋಗುತ್ತದೆ.
#raincoat


