Porte Bagage

Porte Bagage

Porte Bagage | Netherlands | French | 2025

ಪ್ರತಿಯೊಬ್ಬ ಮನುಷ್ಯನ ಅಂತರಾಳದಲ್ಲಿರುವ ತಂದೆ-ಮಗಳ ಬಾಂಧವ್ಯದ ಒಂದು ಅದ್ಬುತ ರೂಪಕ. ಚಿತ್ರದ ಕೇಂದ್ರಬಿಂದುವಾಗಿರುವ ನೂರ್, ತನ್ನ ವೃತ್ತಿಜೀವನದ ಉತ್ತುಂಗದಲ್ಲಿರುವಾಗ ಮರೆಗುಳಿತನದಿಂದ ಬಳಲುತ್ತಿರುವ ತಂದೆಯ ಕೊನೆಯ ಆಸೆಯನ್ನು ಪೂರೈಸಲು ಹೊರಡುವ ಪಯಣವು ಅತ್ಯಂತ ಭಾವುಕವಾಗಿದೆ. ಕಾರಿನ ಮೇಲಿರುವ ‘ಪೋರ್ಟ್ ಬಗಾಜ್’ (ಸಾಮಾನು ಹೊರುವ ಜಾಗ) ಕೇವಲ ಭೌತಿಕ ವಸ್ತುಗಳನ್ನಷ್ಟೇ ಅಲ್ಲದೆ, ಆ ಕುಟುಂಬದ ತಲೆಮಾರುಗಳ ನೆನಪುಗಳು, ಸಾಂಸ್ಕೃತಿಕ ಅಸ್ಮಿತೆ ಮತ್ತು ಒಡೆದು ಹೋದ ಕನಸುಗಳ ಭಾರವನ್ನೂ ಹೊತ್ತಂತೆ ಚಿತ್ರಿಸಲಾಗಿದೆ. ಯುರೋಪಿನಿಂದ ಮೊರಾಕ್ಕೊದವರೆಗೆ ಸಾಗುವ ಈ ರಸ್ತೆ ಪಯಣದಲ್ಲಿ, ತಂದೆಗೆ ತನ್ನ ಹಳೆಯ ದಿನಗಳು ಮರೆತು ಹೋಗುತ್ತಿದ್ದರೂ, ತನ್ನ ಹುಟ್ಟಿದ ಮಣ್ಣಿನ ಮೇಲಿರುವ ಸೆಳೆತ ಮಾತ್ರ ಮಾಸದಿರುವುದು ಪ್ರೇಕ್ಷಕರ ಕಣ್ಣಾಲಿಗಳನ್ನು ತೇವಗೊಳಿಸುತ್ತದೆ.

ನಿರ್ದೇಶಕ ಅಬ್ದೆಲ್ಕರೀಂ ಎಲ್-ಫಾಸಿ ಅವರು ಸಂಭಾಷಣೆಗಳಿಗಿಂತ ಹೆಚ್ಚಾಗಿ ಮೌನ ಮತ್ತು ನೋಟಗಳ ಮೂಲಕ ಭಾವನೆಗಳನ್ನು ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದ ಪ್ರತಿಯೊಂದು ಹಂತದಲ್ಲೂ ನೂರ್ ಎದುರಿಸುವ ಮಾನಸಿಕ ಸಂಘರ್ಷ ಅತ್ತ ತನ್ನ ಸ್ವಂತ ಬದುಕು, ಇತ್ತ ಅಸಹಾಯಕ ತಂದೆಯ ಜವಾಬ್ದಾರಿ ಇಂದಿನ ಪೀಳಿಗೆಯ ಅನೇಕರ ಬದುಕಿನ ಪ್ರತಿಬಿಂಬದಂತಿದೆ. ಅಂತಿಮವಾಗಿ, ಈ ಸಿನಿಮಾ ನಮಗೆ ಕಲಿಸುವುದು ಏನೆಂದರೆ, ನಾವು ಎಷ್ಟೇ ಆಧುನಿಕರಾಗಿ ಬೆಳೆದರೂ ಅಥವಾ ಎಷ್ಟೇ ದೂರದ ದೇಶಗಳಿಗೆ ವಲಸೆ ಹೋದರೂ, ನಮ್ಮ ಬೇರುಗಳು ಮತ್ತು ನಮ್ಮ ಪೋಷಕರೊಂದಿಗಿನ ಕರುಳಬಳ್ಳಿ ಸಂಬಂಧವೇ ನಮ್ಮ ಅಸ್ತಿತ್ವದ ನಿಜವಾದ ಆಧಾರಸ್ತಂಭ. ಪ್ರೀತಿ, ತ್ಯಾಗ ಮತ್ತು ನೆನಪುಗಳ ಸಮ್ಮಿಲನವಾಗಿರುವ ಈ ಸಿನಿಮಾ ನೋಡಿದ ಮೇಲೆ ಪ್ರತಿಯೊಬ್ಬರೂ ತಮ್ಮ ಮನೆಯ ಹಿರಿಯರ ಕೈಯನ್ನು ಒಮ್ಮೆ ಪ್ರೀತಿಯಿಂದ ಹಿಡಿಯಬೇಕು ಎಂಬ ಹಂಬಲ ಮೂಡುವುದು ಈ ಚಿತ್ರದ ಗೆಲುವು.

ನೂರ್ ಳ ಭಾವದಿಂದ ಸಿನೇಮಾ ನೋಡಿದಾಗ ಸಿನೇಮಾ ಇಷ್ಟವಾಗದೆ ಇರೋದಿಲ್ಲ.

Leave a Comment

Your email address will not be published. Required fields are marked *

Scroll to Top