Yes! Movie is all about Respect in Relationships …
ನಾನು ಈಗಷ್ಟೇ ‘ಮೆಟ್ರೋ… ಇನ್ ಡಿನೋ’ ಚಿತ್ರವನ್ನು ನೋಡಿಕೊಂಡು ಬಂದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಚಿತ್ರ ಇನ್ನೂ ನನ್ನ ತಲೆಯಲ್ಲಿ ಹಂಘಂಗೆ ಉಳಿದಿದೆ. ಇದು ಕೇವಲ ಒಂದು ಚಲನಚಿತ್ರವಲ್ಲ – ಆಧುನಿಕ ಸಂಬಂಧಗಳು, Breakupsಗಳು, Extra marital affairsಗಳು ಮತ್ತು ಇವೆಲ್ಲದರ ಜೊತೆಗೆ ವೇಗವಾಗಿ ಸಾಗುತ್ತಿರುವ ನಗರ ಜೀವನದ ಗೊಂದಲಗಳ ಮೂಲಕ ಸಾಗುವ ಒಂದು ಸಂಪೂರ್ಣ ಪ್ರಯಾಣ ಅಂತಂದರೆ ತಪ್ಪಾಗಲಾರದು.
ಈ ಸಿನೆಮಾದಲ್ಲಿ ಪ್ರೀತಿಗಾಗಿ ‘ಹಂಗೆ ಮಾಡುತ್ತೀನಿ, ಹೀಗೆ ಮಾಡುತ್ತೀನಿ’ ಅಂತೆಲ್ಲಾ ಬೊಬ್ಬೆ ಹೊಡೆಯುವ ಹೀರ್-ರಾಂಝಾ ತರಹದ್ದು ಯಾವುದೂ ಇಲ್ಲ. ಬದಲಾಗಿ, ದಿನನಿತ್ಯ ಸಂಸಾರ, ಸಮಾಜ, ಶಾಲೆ, ಕಾಲೇಜು, ಆಫೀಸುಗಳಲ್ಲಿ ಪ್ರತಿ ಕ್ಷಣ ಪ್ರೀತಿಗಾಗಿ ಒದ್ದಾಡುತ್ತಿರುವವರ ಸಹಜ ಕಥೆಯಿದು. ಗೊಂದಲಕ್ಕೊಳಗಾಗಿ ಎಲ್ಲವನ್ನೂ ಅತಿಯಾಗಿ ಯೋಚಿಸುವ ಯುವ ಪ್ರೀತಿಯಿಂದ ಹಿಡಿದು, ಪ್ರೀತಿಯ ನಿಜವಾದ ಅರ್ಥವನ್ನು ಮರುಶೋಧಿಸುವ ವಯಸ್ಸಾದ ದಂಪತಿಗಳವರೆಗೆ ನಡೆಯುವ ಆಂತರಿಕ ಭಾವನೆಗಳ ಚಿತ್ರಣ.
ಸಿನೆಮಾದಲ್ಲಿ ದೊಡ್ಡ ದೊಡ್ಡ ನಟರಿದ್ದಾರೆ… ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದು, ಚಿತ್ರವನ್ನು ಯಶಸ್ವಿಗೊಳಿಸಲು ಪ್ರಮುಖ ಕಾರಣಕರ್ತರಾಗಿದ್ದಾರೆ. ಪ್ರೀತಮ್ ಅವರ ಹಿನ್ನೆಲೆ ಸಂಗೀತವು ಆತ್ಮೀಯ ಸ್ಪರ್ಶವನ್ನು ನೀಡುತ್ತದೆ.
ಹೌದು, ಕೆಲವು ಪಾತ್ರಗಳ ಕಥೆ ಸ್ವಲ್ಪ ನಿಧಾನವಾಗಿದ್ದವು ಅಥವಾ ಅಪೂರ್ಣವೆನಿಸಿದವು. ಕೆಲವು ಕ್ಷಣಗಳನ್ನು ಅನಗತ್ಯವಾಗಿ ಎಳೆದಿದ್ದಾರೆ ಎಂದೆನಿಸಿತು. ಆದರೆ ಚಿತ್ರವು ಪರಿಪೂರ್ಣವಾಗಿರಲು ಪ್ರಯತ್ನಿಸುತ್ತಿಲ್ಲ – ಅದು ಪ್ರಾಮಾಣಿಕವಾಗಿರಲು ಪ್ರಯತ್ನಿಸುತ್ತಿದೆ, ಮತ್ತು ಅದರಲ್ಲಿ ಯಶಸ್ವಿಯಾಗಿದೆ.
ನೀವು ‘ಲೈಫ್ ಇನ್ ಎ… ಮೆಟ್ರೋ’ (Life in a… Metro) ಚಿತ್ರವನ್ನು ಇಷ್ಟಪಟ್ಟಿದ್ದರೆ, ಅಥವಾ ಸೂಕ್ಷ್ಮ ಸಂವೇದನೆಗಳಿರುವ ಚಿತ್ರಗಳನ್ನು ಇಷ್ಟಪಡುತ್ತಿದ್ದರೆ, ಈ ಚಿತ್ರವನ್ನು ನೀವು ಖಂಡಿತವಾಗಿಯೂ ಇಷ್ಟಪಡುತ್ತೀರಿ.


