“ಆಧೇ ಅಧೂರೇ” – ಮಹಿಳೆಯ ಅಸ್ತಿತ್ವದ ಅಸಂಪೂರ್ಣ ಅನ್ವೇಷಣೆ.
ಮನಸ್ಸು.. ದೇಹ..ಬುದ್ದಿ.. ಅಹಂಕಾರ.. ಚಿತ್ತ..
ಇವುಗಳಿಗೆಲ್ಲ ಬೇಕಾದಕ್ಕಿಂತ ಒಂದು ಗುಲಗಂಜಿ ಹೆಚ್ಚಿಗೆ ಇದ್ದು ಯಾಕೆ ಮನುಷ್ಯ ‘ಖಾಲಿತನ’ ಅನುಭವಿಸ್ತಾನೆ??
ಏನದು ಬೇಕಾದದ್ದು? ಅದು ಸಿಕ್ರೆ ಸಮಾಧಾನ ಆಗ್ತಾನ?
ಅಂತೆಲ್ಲ ನೂರೆಂಟು ಪ್ರಶ್ನೇಗಳನ್ನ ತಲೆಯಲ್ಲಿ ಓಡಾಡುತ್ತಿರುವಾಗ
ಸಿಕ್ಕ ಚಂದದ ನಾಟಕ “ಆಧೇ ಅಧೂರೇ..”
ಈ ಖಾಲಿತನ ಅನ್ನೊದು ಪ್ರತಿ ಮನುಷ್ಯನ ಮೂಲಭೂತ ಅಂಗವಾಗಿ ಹೋಗಿರುವಾಗ ಇವುಗಳಿಗೆ ಉತ್ತರ ಎಲ್ಲಿಂದ ಹುಡುಕೊ ಹುಡಕೋದು ಅನ್ನೊ
ಮೂಲಭೂತ ಪ್ರಶ್ನೆಯಾಗಿ ಉಳಿದುಹೋಗಿದೆ.
“Is Shahar Mein har Shakhs Pareshaan Sa Kyon Hai..”
“ಆಧೇ ಅಧೂರೇ” ನಾಟಕವು ಕೇವಲ ವೈವಾಹಿಕ ಜೀವನದ ಸಂಘರ್ಷವನ್ನು ತೋರಿಸುವ ಕೃತಿ ಅಲ್ಲ, ಇದು ಮಹಿಳೆಯ ಆತ್ಮಾನ್ವೇಷಣೆ, ಆಕೆಯ ನಿರೀಕ್ಷೆಗಳು ಮತ್ತು ಸಮಾಜದ ವಿರುದ್ಧ ನಡೆಯುವ ಅವಳ ಹೋರಾಟವನ್ನು ತಾತ್ವಿಕ ದೃಷ್ಟಿಕೋನದಲ್ಲಿ ಅನಾವರಣಗೊಳಿಸುತ್ತದೆ. ಈ ನಾಟಕವು ಕುಟುಂಬ, ವೈಯಕ್ತಿಕ ಸಂಬಂಧ, ಮತ್ತು ಮಾನಸಿಕ ಅಸಮಾಧಾನದ ತೀವ್ರತೆಯನ್ನು ಒಳಗೊಂಡಿದೆ.
ನಾಟಕದ ಮುಖ್ಯ ಪಾತ್ರ ಸಾವಿತ್ರಿ, ಪತಿ, ಮಕ್ಕಳು, ಮತ್ತು ಜೀವನದ ಅನಿಶ್ಚಿತತೆಯ ನಡುವೆ ತನ್ನ ಸ್ಥಾನವನ್ನು ಕಂಡುಕೊಳ್ಳಲು ಹೋರಾಡುವ ಮಧ್ಯಮ ವರ್ಗದ ಮಹಿಳೆ. ಅವಳ ಪತಿ ಮಹಿಂದರ್ ಉದ್ಯೋಗವಿಲ್ಲದವನಾಗಿದ್ದು, ತನ್ನ ವೈಫಲ್ಯವನ್ನು ಒಪ್ಪಿಕೊಂಡು ನಿರಾಸೆಯಲ್ಲಿ ಜೀವಿಸುತ್ತಾನೆ. ಮಕ್ಕಳು ತಮಗೆ ಬೇಕಾದ ಜೀವನಕ್ಕಾಗಿ ಹೋರಾಡುತ್ತಿದ್ದಾರೆ, ಆದರೆ ಸಾವಿತ್ರಿ ಮಾತ್ರ ಈ ಕುಟುಂಬವನ್ನು ಅಸ್ತಿತ್ವದಲ್ಲಿ ಇಡುವ ಏಕೈಕ ಶಕ್ತಿ.
ಈ ಕುಟುಂಬದ ಅಸ್ಥಿರತೆಯಿಂದ, ಸಾವಿತ್ರಿ ಬೇರೆ ಪುರುಷರ ಜೊತೆಗೆ ಸಂಬಂಧಗಳಲ್ಲಿ ನೆಮ್ಮದಿ ಮತ್ತು ಪೂರ್ತಿತನವನ್ನು ಹುಡುಕಲು ಪ್ರಯತ್ನಿಸುತ್ತಾಳೆ. ಆದರೆ ಪ್ರತಿಯೊಬ್ಬ ಪುರುಷನಲ್ಲಿಯೂ ಆಕೆಗೆ ಒಂದೇ ಸತ್ಯ ಸ್ಪಷ್ಟಗೊಳ್ಳುತ್ತದೆ – “ನಾನು ತಾನೇ ಅಪೂರ್ಣನಾಗಿದ್ದರೆ, ನಿನ್ನನ್ನು ಹೇಗೆ ಪೂರ್ತಿಗೊಳಿಸಬಲ್ಲೆ?” ಈ ಸಂದೇಶವು ನಾಟಕದ ತತ್ವವನ್ನು ತೊರಿಸುತ್ತದೆ.
“ಆಧೇ ಅಧೂರೇ” ನಾಟಕದಲ್ಲಿ ಪ್ರತಿಯೊಬ್ಬ ಪಾತ್ರವೂ ಸಾವಿತ್ರಿಯ ನೋವಿನ ಹೊಸ ಆಯಾಮವನ್ನು ಅನಾವರಣಗೊಳಿಸುತ್ತದೆ. ನಾಟಕದ ಸಂಭಾಷಣೆಗಳು ಸರಳವಾದರೂ, ಅವುಗಳ ಹಿಂದಿನ ಭಾವನಾತ್ಮಕ ತೀಕ್ಷ್ಣತೆ ಪ್ರೇಕ್ಷಕರನ್ನು ಆಳವಾಗಿ ಕಾಡುತ್ತದೆ.
ಈ ನಾಟಕವು ಪುರಷಸತ್ತಾತ್ಮಕ ವ್ಯವಸ್ಥೆಯಲ್ಲಿ ಮಹಿಳೆಯ ಸ್ಥಿತಿಯನ್ನು ತಾತ್ವಿಕವಾಗಿ ಅಧ್ಯಯನ ಮಾಡುತ್ತದೆ. ಸ್ತ್ರೀ ಕೇವಲ ಮನೆಯ ಕೇಂದ್ರವಾಗಿ ಬದಲಾಗುತ್ತಾಳೆ, ಆದರೆ ಅವಳಿಗೆ ಬೇಕಾದ ಪ್ರೀತಿ, ಶಾಂತಿ ಮತ್ತು ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಿಲ್ಲ. ಈ ನಾಟಕವನ್ನು ವೀಕ್ಷಿಸಿದಾಗ, ಒಂದು ಪ್ರಶ್ನೆ ಅನಿವಾರ್ಯವಾಗಿ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ – ಸಂಪೂರ್ಣತೆಯ ನಿರೀಕ್ಷೆಯೇ ತಪ್ಪಾ? ಮಹಿಳೆ ಅಸಂಪೂರ್ಣತೆಯೊಂದಿಗೇ ಜೀವಿಸಬೇಕಾ? ಅಥವಾ ಕಾಲಕ್ಕೆ ತಕ್ಕಂತೆ ಭಾವ, ರುಚಿ, ಸ್ವಾತಂತ್ರ್ಯ ಇವೆಲ್ಲವೂ ಬದಲಾಗತ್ವಾ? ಮೂಲದಲ್ಲಿ ಮನುಷ್ಯನಿಗೆ ಬೇಕಾಗಿರುವುದೇನು? ಮತ್ತದೆ.. ಬೇಕಾಗಿರೋದು ಸಿಕ್ರೆ ಸುಖವಾಗಿರಬಹುದಾ? ಅನ್ನೊ ನೋರೆಂಟು ಪ್ರಶ್ನೇಗಳು.
“ಆಧೇ ಅಧೂರೇ” ತನ್ನ ತಾತ್ವಿಕ ಅಂಶಗಳಿಂದ ಪ್ರೇಕ್ಷಕರಿಗೆ ಆಳವಾದ ಆಲೋಚನೆಗೆ ಅವಕಾಶ ಒದಗಿಸುತ್ತದೆ. ಮಾನವ ಸಂಬಂಧಗಳ ಅಸಂಪೂರ್ಣತೆಯನ್ನು ಪ್ರತಿಬಿಂಬಿಸುವ ಈ ನಾಟಕ, ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವಂತಹ ಶಕ್ತಿಯುತ ಕೃತಿ. ಲಿಲ್ಲೇಟ್ ಡುಬೆ ಅವರ ನಿರ್ದೇಶನ, ಕಲಾವಿದರ ಭಾವನಾತ್ಮಕ ಅಭಿನಯ, ಮತ್ತು ನಾಟಕದ ಆಳವಾದ ವಿಷಯವು ಇದನ್ನು ಅವಿಸ್ಮರಣೀಯವಾಗಿಸುತ್ತದೆ.
ನಾಟಕ ಬರೆದದ್ದು ಮೋಹನ್ ರಾಕೇಶ್.
